![]() |
| ವಿಜಯ ಕರ್ನಾಟಕ ನ್ಯೂಸ್ ಪೇಪರ್ ವರದಿ ಹಿರೇಕುಂಬಳಗುಂಟಿ |
ಹಿರೇಕುಂಬಳಗುಂಟೆಯ ಈ ವರ್ಷದ ಹಾಲಪ್ಪಜ್ಜನ ಮುಳ್ಳುಗದ್ದುಗೆಯ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ತೀವ್ರ ಮಳೆ ಕೊರತೆಯಿದ್ದರೂ ಹಾಲೇಶನ ಕೃಪಾಕಟಾಕ್ಷದ ರಕ್ಷೆಯಿಂದ ಊರಿನ ರೈತರ ಬೆಳೆಗಳು ಅವರ ಕಣಗಳನ್ನು ಸೇರಿವೆ. ಜಾತ್ರೆಗೆ ಒಂದಷ್ಟು ದಾನಿಗಳು ನೆರವಿಗೆ ಬಂದದ್ದರಿಂದಾಗಿ ರೈತರು ನಿರಮ್ಮುಳವಾಗಿದ್ದಾರೆ.
ನಿಜ ; ಹಾಲಪ್ಪಜ್ಜನ ಜಾತ್ರೆಯು ಯಾರಿಗೂ ಹೊರೆಯಾಗದೆ, ಸಂಭ್ರಮವೊಂದಕ್ಕೆ ಹರಿಗೋಲಾಗಿದೆ!
ಈ ವರ್ಷದ ಜಾತ್ರೆಯು ಒಂದಷ್ಟು ಕಾರಣಗಳಿಂದಾಗಿ ವಿಶಿಷ್ಟವಾಗಿದೆ.
ಮೊದಲ ದಿನದ ದೀಪೋತ್ಸವದ ವೇಳೆಯಲ್ಲಿ ನೂರಾರು ಮಹಿಳೆಯರು ಮೂರು-ನಾಲ್ಕು ಗಂಟೆಗಳ ಕಾಲ ದೇವಸ್ಥಾನದ ಆವರಣದಲ್ಲಿ ಲಭ್ಯವಿದ್ದು ಅವರನ್ನು ವಿಶೇಷವಾಗಿ ಗಮನದಲ್ಲಿರಿಸಿಕೊಂಡು,ಅವರಿಗೂ ಒಂದಷ್ಟು ಬದುಕಿನ ಸಂಸ್ಕಾರ ಸಂದೇಶಗಳನ್ನು ತಲುಪಿಸಬೇಕೆಂಬ ಸದುದ್ದೇಶದಿಂದ ಇಬ್ಬರು ವಿಶಿಷ್ಟ ಸಾಧಕರಿಂದ ಭಾಷಣ-ಸಂವಾದ ಗೋಷ್ಠಿ ಏರ್ಪಡಿಸಿದ್ದೇವೆ.
ಅವರಲ್ಲಿ ಒಬ್ಬರು, ಕುಮಾರಿ ಹಾರಿಕ Harika Manjunath ,ತುಂಬಾ ಚಿಕ್ಕ ವಯಸ್ಸಿನಲ್ಲೇ ರಾಜ್ಯಾದ್ಯಂತ ತನ್ನ ವಿಶಿಷ್ಟ ಮಾತುಗಾರಿಕೆಯಿಂದ ಪ್ರಸಿದ್ಧಳಾದ ಪುಟ್ಟ ಬಾಲೆ!
ಪ್ರಧಾನಿ ಮೋದಿಯವರಿಂದಲೂ ಪ್ರಶಂಸೆಗೊಳಗಾಗಿ,ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ರವರಿಗೂ ಪ್ರೀತಿಪಾತ್ರಳಾದ ಪುಟ್ಟ ಹುಡುಗಿ!
ಬರೀ ಭಾಷಣದಲ್ಲಷ್ಟೇ ಅಲ್ಲ , ಈ ಪೋರಿಯು ಅನೇಕ ಸೇವಾಕೈಂಕರ್ಯಗಳಲ್ಲೂ ಭಾಗಿಯಾದವಳು!
ನಮ್ಮೂರಿನ ಹೆಣ್ಣುಮಕ್ಕಳ ಬದುಕಿಗೆ ಬೇಕಾದ ಸಂಸ್ಕಾರಗಳ ಬಗ್ಗೆ, ಆದರ್ಶನೀಯ ಮಾತೃತ್ವದ ಮೂಲಕ ಜೀವನವನ್ನು ರಾಷ್ಟ್ರಾರ್ಪಿತಗೊಳಿಸುವುದರ ಬಗ್ಗೆ ಕುಮಾರಿ ಹಾರಿಕ ಮಾತನಾಡಲಿದ್ದಾಳೆ!
ಮತ್ತೊಬ್ಬರು; ಉನ್ನತ ಶಿಕ್ಷಣದ ಹಿನ್ನೆಲೆಯಿದ್ದರೂ ಕೃಷಿಯನ್ನೇ ನಂಬಿ ಅದರಲ್ಲೇ ಸಾಧನೆ ಮಾಡಿದಂಥವರು... ಶ್ರೀ ವಿಶ್ವೇಶ್ವರ ಎಚ್. ಸಜ್ಜನ್ ರವರು! ಪ್ರಖರ ರಾಷ್ಟ್ರವಾದಿಗಳೂ ಹೌದು! ಗ್ರಾಮೀಣ ಮಹಿಳೆಯರು ಕೃಷಿಯಲ್ಲಿ ಅರ್ಥಪೂರ್ಣವಾಗಿ ಹೇಗೆ ತೊಡಗಿಸಿಕೊಳ್ಳಬಹುದು,ಅದರಿಂದಲೇ ತಮ್ಮಗಳ ಬದುಕುಗಳನ್ನು ರಾಷ್ಟ್ರಾರ್ಪಿತವನ್ನಾಗಿಸುವ ಬಗೆ ಹೇಗೆಂಬುದರ ಕುರಿತು ಮಾತನಾಡಲಿದ್ದಾರೆ.
ನಂತರ ಮಹಿಳೆಯರಿಗೆ ಈ ಇಬ್ಬರೂ ಅತಿಥಿಗಳ ಜೊತೆ ಪ್ರಶ್ನೋತ್ತರ-ಸಂವಾದಕ್ಕೆ ಅವಕಾಶವಿದೆ!
ಈ ವರ್ಷದ ಜಾತ್ರೆಯು "ಜಲ ಸಂರಕ್ಷಣೆ-ಜೀವ ಜಲದ ಮಿತಬಳಕೆ" ಎಂಬ ಆಶಯ, ಪರಿಕಲ್ಪನೆಯಲ್ಲಿ ಜರುಗಲಿದೆ. ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶದ ಬೈಕ್ ರ‌್ಯಾಲಿಯಿಂದಲೇ ಜಾತ್ರೆಯು ವಿಧ್ಯುಕ್ತವಾಗಿ ಚಾಲನೆಗೊಳ್ಳಲಿದೆ.
ಜಾತ್ರೆಯ ಮೂರೂ ದಿನಗಳ ಕಾಲ ಈ ಬಗ್ಗೆಗಿನ ಜಾಗೃತಿ ಕಾರ್ಯಕ್ರಮ,ಶ್ರಮದಾನ,ವಿಚಾರ ಗೋಷ್ಠಿಗಳು ಇರಲಿವೆ.
ಹಾಲಪ್ಪಜ್ಜನ ಜಾತ್ರೆಯು ಅರ್ಥಪೂರ್ಣವಾಗಿ ಸಂಪನ್ನಗೊಳ್ಳಬೇಕಾದರೆ ನೀವೂ ಕೈ ಜೋಡಿಸಬೇಕು.
ಜಾತ್ರೆಗೆ ಎಲ್ಲರಿಗೂ ಮುಕ್ತ ಆಹ್ವಾನವಿದೆ. ಬನ್ನಿ...ನಿಮ್ಮವರನ್ನೂ ಕರೆತನ್ನಿ.
"ನಿಮ್ಮ ಬರುವೆನ್ನಸುವಿನ ಬರುವು
ನಿಮ್ಮ ಇರುವೇ ನನ್ನ ಜೀವ ಜೀವಾಳವಯ್ಯ" ಎಂಬ ಸದ್ಗುರು ಶಿವಯೋಗಿ ಹಾಲಸ್ವಾಮಿಯ ಆಂತರ್ಯದ ಕರೆಯನ್ನು ಎಲ್ಲರಿಗೂ ತಲುಪಿಸಿಬಿಡಿ.
ಸಾಹಿತ್ಯ ರಚನೆ= ಜಿ ಎನ್ ನಾಗರಾಜ್ ಗೌಡ



Comments
Post a Comment